ಬೆಳ್ಳುಳ್ಳಿ
ಲಿಲ್ಲಿಯೇಸೀ ಕುಟುಂಬಕ್ಕೆ ಸೇರಿದ ಪ್ರಸಿದ್ಧ ಮೂಲಿಕೆ ಸಸ್ಯ (ಗಾರ್ಲಿಕ್). ಈರುಳ್ಳಿ (ಉಳ್ಳಾಗಡ್ಡಿ) ಹತ್ತಿರ ಸಂಬಂಧಿಯಾದ ಇದು ಕೂಡ ಅಲ್ಲಿಯಮ್ ಜಾತಿಗೆ ಸೇರಿದೆ. ಅಲ್ಲಿಯಮ್ ಸಟೈವಮ್ ಇದರ ಸಸ್ಯ ವೈಜ್ಞಾನಿಕ ಹೆಸರು. ಮಧ್ಯ ಏಷ್ಯ ಇದರ ತವರು ಎನ್ನಲಾಗಿದೆ. ಬಲುಹಿಂದಿನಿಂದ ಭಾರತದಲ್ಲಿ ಇದನ್ನು ಸಂಬಾರ ಸಸ್ಯವಾಗಿ ಬೃಹತ್ ಮೊತ್ತದಲ್ಲಿ ಬೆಳೆಸಲಾಗುತ್ತಿದೆ. 

	ಇದು ಬಹುವಾರ್ಷಿಕ ಸಸ್ಯ. ಕಿರಿಯಗಲದ ಚಪ್ಪಟೆ ಎಲೆಗಳು. ನೆಲದೊಳಗೆ ಹುದುಗಿ ಬೆಳೆವ ಗೆಡ್ಡೆಕಾಂಡ, ವರ್ಷಕ್ಕೊಮ್ಮೆ ಕಾಂಡದ ನಡುವಿನಿಂದ ಹುಟ್ಟಿ ನೆಲದ ಮೇಲಕ್ಕೆ ಬರುವ ಹೂಗೊಂಚಲು, ಸಣ್ಣಗಾತ್ರದ ಬಿಳಿಯಬಣ್ಣದ ಹೂಗಳು ಇದರ ಲಕ್ಷಣಗಳ ಪೈಕಿ ಮುಖ್ಯವಾದವು. ಗೆಡ್ಡೆ ವಾಸ್ತವವಾಗಿ ಸಣ್ಣಗಾತ್ರದ ಹಲವಾರು ಕಿರುಗೆಡ್ಡೆಗಳ ಸಂಯುಕ್ತಗೆಡ್ಡೆ. ಒಂದೊಂದು ಕಿರುಗೆಡ್ಡೆಯಲ್ಲೂ ಹಲವಾರು ಪಿಳುಕುಗಳುಂಟು (ಕ್ಲೋವ್ಸ್). ಬೆಳ್ಳುಳ್ಳಿಯ ಗೆಡ್ಡೆಗೆ ವಿಶಿಷ್ಟ ವಾಸನೆಯಿದೆ. ಇದಕ್ಕೆ ಕಾರಣ ಒಳಗಿರುವ ಗಂಧಕಯುಕ್ತ ತೈಲ. 

	ಬೆಳ್ಳುಳ್ಳಿಯ ಬೇಸಾಯಕ್ರಮ ಈರುಳ್ಳಿಯದರಂತೆಯೇ ಇದೆ. ಆದರೆ ಇದಕ್ಕೆ ಹೆಚ್ಚು ಫಲವತ್ತಾದ ಮಣ್ಣು ಮತ್ತು 1000-1500 ಮೀ. ಎತ್ತರದ ಭೂಮಿ ಪ್ರಶಸ್ತ. ತಂಪುಹವೆಯಿರುವ ಪ್ರದೇಶಗಳಲ್ಲಿ ಇದರ ಬೆಳೆವಣಿಗೆ ಹುಲುಸು. ಸಂತಾನವೃದ್ಧಿ ಪಿಳುಕುಗಳ ಮೂಲಕ ಭೂಮಿಯನ್ನು ಹದಗೊಳಿಸಿ, ಪಾತಿಗಳಾಗಿ ವಿಂಗಡಿಸಿ, ಸ್ವಲ್ಪ ಆಳದ ಸಾಲುಗೆರೆ ಮಾಡಿ, ಸುಮಾರು 15 ಸೆಂಟಿಮೀಟರಿಗೆ ಒಂದರಂತೆ ಪಿಳುಕುಗಳನ್ನು ನೆಡಲಾಗುತ್ತದೆ. ಸುಮಾರು ಎರಡು ತಿಂಗಳ ವೇಳೆಗೆ ಹೊಸಗೆಡ್ಡೆಗಳು ರೂಪುಗೊಳ್ಳುವುವು; ಸುಮಾರು ಐದು ತಿಂಗಳ ಅನಂತರ ಗೆಡ್ಡೆಗಳು ಹದವಾಗಿ ಬಲಿತು, ಕೀಳಲು ಸಿದ್ಧವಾಗಿರುವುವು. ಒಂದು ಹೆಕ್ಟೇರಿಗೆ ಸರಾಸರಿ 180 ಕೆಜಿ ಬೆಳ್ಳುಳ್ಳಿ ಪಡೆಯಬಹುದು. ಕೆಲವೊಮ್ಮೆ ಹೆಕ್ಟೇರಿಗೆ 540 ಕೆಜಿ ಇಳುವರಿ ದೊರೆಯುವುದುಂಟು. 

	ಬೆಳ್ಳುಳ್ಳಿಗೆ ಭಾರತೀಯ ಪಾಕಕಲೆಯಲ್ಲಿ ವಿಶಿಷ್ಟ ಸ್ಥಾನವುಂಟು. ಸಂಬಾರ ಜಿನಸಾಗಿ ಇದು ಬಲುಪ್ರಸಿದ್ಧ. ಪಲ್ಯ, ಚಟ್ನಿ, ತಿಳಿಸಾರು ಮುಂತಾದವುಗಳಲ್ಲಿ ಮಸಾಲೆಯಾಗಿ ಇದು ಬಳಕೆಯಾಗುತ್ತದೆ. ಅಲ್ಲದೆ ಇದಕ್ಕೆ ಔಷಧೀಯ ಮಹತ್ತ್ವವೂ ಉಂಟು. ಇದು ಪಚನಕಾರಿ, ವಾತಹರ, ನೋವುನಿವಾರಕ ಮುಂತಾಗಿ ಹೆಸರುಗಳಿಸಿದೆ. ಇದರ ರಸವನ್ನು ಚರ್ಮರೋಗ, ಕಿವಿನೋವು, ಚಿಕಿತ್ಸೆಗೆ ಉಪಯೋಗಿಸಲಾಗುತ್ತದೆ. ಫುಪ್ಫುಸದ ಹಲವಾರು ಬಗೆಯ ರೋಗಗಳಿಗೂ ವ್ರಣ, ಹುಣ್ಣುಗಳಿಗೂ ಇದರ ಹಸಿರಸವನ್ನು ಬಳಸುವುದಿದೆ. ಇದರ ಸೇವನೆಯಿಂದ ರಕ್ತದ ಕೊಲೆಸ್ಟಿರಾಲ್ ಮೊತ್ತ ಕಡಿಮೆಯಾಗುವುದೆಂದು ಇದರಿಂದ ರಕ್ತದೊತ್ತಡ ನಿಯಂತ್ರಿತವಾಗುವುದೆಂದೂ ಹೇಳಲಾಗಿದೆ. 				
(ಟಿ.ಸಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ